ಆರ್ಥಿಕ ಇಲಾಖೆಯ ಅಧೀನದಲ್ಲಿ ಬರುವ ಆಡಳಿತಾತ್ಮಕ ಇಲಾಖೆಗಳು ಹಾಗೂ ನಿಗಮ (ನಿ) ಈ ಕೆಳಗಿನಂತಿವೆ.
ಪರಿಚಯ:
ಆರ್ಥಿಕ ಇಲಾಖೆಯು ಕರ್ನಾಟಕ ಸರ್ಕಾರ ಸಚಿವಾಲಯದ ಪ್ರಮುಖ ಇಲಾಖೆಗಳಲ್ಲಿ ಒಂದಾಗಿದೆ. ರಾಜ್ಯ ಸರ್ಕಾರದ ವಿತ್ತೀಯ ನಿರ್ವಹಣೆಯ ಜವಾಬ್ದಾರಿಯನ್ನು ಆರ್ಥಿಕ ಇಲಾಖೆಯು ನಿರ್ವಹಿಸುತ್ತದೆ. ಸಂಪನ್ಮೂಲಗಳ ಕ್ರೋಢೀಕರಣದಿಂದ ಪ್ರಾರಂಭಿಸಿ ತೆರಿಗೆ ಮತ್ತು ತೆರಿಗೆ ರಹಿತ ಆದಾಯವನ್ನು ಹೆಚ್ಚಿಸುವುದು. ಆಂತರಿಕ ಸಾಲ, ಸಣ್ಣ ಉಳಿತಾಯ ಮತ್ತು ಭವಿಷ್ಯನಿಧಿ ಮುಂತಾದ ಮೂಲಗಳಿಂದ ಸಾಲ ಪಡೆಯುವುದು. ವಾರ್ಷಿಕ ಆಯವ್ಯಯಗಳ ತಯಾರಿಕೆ ಹಾಗೂ ಆಯವ್ಯಯದ ಅನುಷ್ಠಾನದ ಮೂಲಕ ಸಂಪನ್ಮೂಲಗಳ ಸಮರ್ಥ ಬಳಕೆ, ಸಾರ್ವಜನಿಕ ವೆಚ್ಚಗಳ ನಿರ್ವಹಣೆ, ರಾಜ್ಯದ ಸಾರ್ವಜನಿಕ ಲೆಕ್ಕಕ್ಕೆ ಸಂದಾಯವಾಗುವ ಸ್ವೀಕೃತಿ ಮತ್ತು ಅದರಿಂದ ಆಗುವ ವೆಚ್ಚಗಳ ಲೆಕ್ಕ ನಿರ್ವಹಣೆ, ಆಂತರಿಕ ಲೆಕ್ಕ ಪರಿಶೋಧನೆ ಮತ್ತು ಬಾಹ್ಯ ಲೆಕ್ಕ ಪರಿಶೋಧನೆಗಳ ಅನುಸರಣೆಯ ಮೂಲಕ ಸಾರ್ವಜನಿಕ ಹಣದ ಬಗ್ಗೆ ಹೊಣೆಗಾರಿಕೆಯನ್ನು ಖಾತರಿಪಡಿಸುವುದು ಮುಂತಾದ ಜವಾಬ್ದಾರಿ ಹಾಗೂ ಕಾರ್ಯಗಳನ್ನು ಇಲಾಖೆ ಹೊಂದಿದೆ. ಆರ್ಥಿಕ ಇಲಾಖೆಯು ಆರ್ಥಿಕ ಸಲಹೆಗಳನ್ನು ಸಹ ನೀಡುತ್ತದೆ. ಅದು ಸೇವಾ ನಿಬಂಧನೆಗಳು ಹಾಗೂ ಪಿಂಚಣಿ ವಿಷಯಗಳಲ್ಲಿ ಅಭಿಪ್ರಾಯ ನೀಡುವ ಇಲಾಖೆಯಾಗಿದೆ. ಇಲಾಖೆಯು ಬ್ಯಾಂಕ್ ಗಳು ಹಾಗೂ ಹಣಕಾಸು ಸಂಸ್ಥೆಗಳಿಂದ ಸಾಲ ದೊರೆಯಲು ಅನುಕೂಲ ಮಾಡಿಕೊಡುತ್ತದೆ.
ಪೀಠಿಕೆ:
ಆರ್ಥಿಕ ಇಲಾಖೆಯ ಕರ್ನಾಟಕ ಸರ್ಕಾರ ಸಚಿವಾಲಯದ ಒಂದು ಇಲಾಖೆಯಾಗಿದ್ದು, ಸನ್ಮಾನ್ಯ ಮುಖ್ಯ ಮಂತ್ರಿಯವರು ಹಣಕಾಸು ಖಾತೆಯನ್ನು ಹೊಂದಿರುತ್ತಾರೆ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರು ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ. ಇಲಾಖೆಯಲ್ಲಿ ಕಾರ್ಯದರ್ಶಿಗಳು, ಅಪರ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು, ಉಪ ಕಾರ್ಯದರ್ಶಿಗಳು, ಜಂಟಿ ನಿಯಂತ್ರಕರು (ಆರ್ಥಿಕ ನಿರ್ವಹಣೆ), ಜಂಟಿ ನಿರ್ದೇಶಕರು (ಯೋಜನಾ ಮೇಲ್ವಿಚಾರಣಾ ಘಟಕ), ವಿಶೇಷಾಧಿಕಾರಿಗಳು, ಕಾನೂನು ಕೋಶದ ಮುಖ್ಯಸ್ಥರು, ಅಧೀನ ಕಾರ್ಯದರ್ಶಿಗಳು ಮತ್ತು ಶಾಖಾಧಿಕಾರಿಗಳು ಹಾಗೂ ಸಿ ಮತ್ತು ಡಿ ವೃಂದದ ನೌಕರರುಗಳ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರ್ಥಿಕ ಇಲಾಖೆಯ ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು, 1977 ರನ್ವಯ ನಿಗದಿಪಡಿಸಿದ ಪ್ರಕಾರ್ಯಗಳನ್ನು ನಿರ್ವಹಿಸುತ್ತದೆ. ಆರ್ಥಿಕ ಇಲಾಖೆಯ ವ್ಯಾಪ್ತಿಯಲ್ಲಿ ಈ ಕೆಳಕಂಡ ಕ್ಷೇತ್ರ ಇಲಾಖೆಗಳು ಹಾಗೂ ನಿಗಮ/ ಮಂಡಳಿಗಳಿಗೆ ಸಂಬಂಧಿಸಿದಂತೆ ಆಡಳಿತ್ತಾತ್ಮಕ ಹಾಗೂ ಸೇವೆಗಳಿಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಸಹ ನಿರ್ವಹಿಸಲಾಗುತ್ತದೆ.
1. ವಾಣಿಜ್ಯ ತೆರಿಗೆಗಳ ಇಲಾಖೆ
2. ರಾಜ್ಯ ಅಬಕಾರಿ ಇಲಾಖೆ
3. ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ
4. ಖಜಾನೆ ಇಲಾಖೆ
5. ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ಇಲಾಖೆ
6. ಕರ್ನಾಟಕ ರಾಜ್ಯ ವಿಮಾ ಇಲಾಖೆ
7. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ
8. ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ
9. ವಿತ್ತೀಯ ಕಾರ್ಯನೀತಿ ಸಂಸ್ಥೆ
1. ವಾಣಿಜ್ಯತೆರಿಗೆ ಇಲಾಖೆ:-
ವಾಣಿಜ್ಯ ತೆರಿಗೆ ಇಲಾಖೆಯು ಕರ್ನಾಟಕ ಸರ್ಕಾರ ಸಚಿವಾಲಯದ ಹಣಕಾಸು ಇಲಾಖೆಯ ಒಂದು ವಿಭಾಗವಾಗಿರುತ್ತದೆ. ವಾಣಿಜ್ಯ ತೆರಿಗೆಗಳ ಆಯುಕ್ತರು ವಾಣಿಜ್ಯ ತೆರಿಗೆಗಳ ಇಲಾಖೆಯ ರಾಜ್ಯ ಮಟ್ಟದ ಮುಖ್ಯಸ್ಥರಾಗಿರುತ್ತಾರೆ. ಸೇವೆಯನ್ನು ಒದಗಿಸುವ ಗುಣಮಟ್ಟವನ್ನು ಉತ್ತಮಪಡಿಸುವ ಸಲುವಾಗಿ ನಾಗರೀಕ ಸನ್ನದನ್ನು ಅಳವಡಿಸಿಕೊಂಡಿದೆ. ಈ ಸನ್ನದು ಇಲಾಖೆಯ ದೂರದೃಷ್ಟಿ, ಧ್ಯೇಯ, ಉದ್ದೇಶಗಳು, ಸೇವೆಯನ್ನು ಒದಗಿಸುವ ಮಾನದಂಡಗಳು, ತೆರಿಗೆ ಕಾರ್ಯನೀತಿಯನ್ನು ಅತ್ಯುತ್ತಮವಾಗಿ ಸಾಧಿಸುವುದು. ತೆರಿಗೆ ಪಾವತಿದಾರರು ತೆರಿಗೆ ಕಾಯ್ದೆಗಳನ್ನು ಸ್ವಯಂ ಪರಿಪಾಲಿಸಲು ಪ್ರೇರೇಪಿಸುವಂತಹ ವಾತಾವರಣವನ್ನು ನಿರ್ಮಿಸುವುದು ಹಾಗೂ ದಕ್ಷತೆಯಿಂದ ರಾಜಸ್ವವನ್ನು ಸಂಗ್ರಹಿಸುವುದು.
2. ರಾಜ್ಯ ಅಬಕಾರಿ ಇಲಾಖೆ:-
ರಾಜ್ಯ ಅಬಕಾರಿ ಇಲಾಖೆಯು ಕರ್ನಾಟಕದಲ್ಲಿ ಆರ್ಥಿಕ ಇಲಾಖೆಯ ಆಡಳಿತಾತ್ಮಕ ನಿಯಂತ್ರಣದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡನೇ ಅತಿದೊಡ್ಡ ರಾಜಸ್ವಗಳಿಸುವ ಇಲಾಖೆಯಾಗಿದೆ. ರಾಜ್ಯ ಅಬಕಾರಿ ಇಲಾಖೆಯ ಆಡಳಿತ ವ್ಯಾಪ್ತಿಯು ಮದ್ಯಸಾರ, ಭಾರತೀಯ ಮದ್ಯ, ಬೀರ್, ಔಷದೀಯ ಮತ್ತು ಪ್ರಸಾಧನ ತಯಾರಿಕೆಗಳು ಇತ್ಯಾದಿ ಪದಾರ್ಥಗಳನ್ನು ಒಳಗೊಳ್ಳುತ್ತವೆ. ಕಚ್ಚಾ ವಸ್ತುಗಳನ್ನು ನಿಯಮಿತವಾಗಿ ಪಡೆದು, ಅವುಗಳನ್ನು ಉಪಯೋಗಿಸಿ ಹಲವಾರು ಸರಕುಗಳ ತಯಾರಿಕೆ, ಅವುಗಳ ಸಂಗ್ರಹಣೆ ಮತ್ತು ವಿತರಣೆ ಮೂಲಕ ಸಾರ್ವಜನಿಕ ಸ್ವಾಸ್ಥ್ಯದ ಭರವಸೆ ನೀಡುವುದು. ಇಲಾಖೆಯ ಉದ್ದೇಶ ಹಾಗೂ ಮದ್ಯಸಾರ, ಮದ್ಯಸಾರಗಳ ತಯಾರಿಕೆ, ಸೇವನೀಯ ಮದ್ಯ ಮತ್ತು ಇತರ ಮಾದಕಗಳ ತಯಾರಿಕೆ, ಸಾಗಾಣಿಕೆ, ಸ್ವಾಧೀನತೆ, ಮಾರಾಟ ಮತ್ತು ಇತರೆ ವ್ಯಾಪಾರ ಚಟುವಟಿಕೆಗಳನ್ನು ನಿಯಂತ್ರಿಸುವುದರ ಮೂಲಕ ರಾಜ್ಯ ಅಬಕಾರಿ ನೀತಿಗಳು ಮತ್ತು ಪ್ರಕ್ರಿಯೆಗಳನ್ನು ಜಾರಿಗೊಳಿಸುವುದು ಮತ್ತು ಸಂಬಂಧಿತ ತೆರಿಗೆಗಳ ಸಂಗ್ರಹಣೆಯಲ್ಲಿ ನಿಗಾವಹಿಸಿವುದು.
3. ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ:-
1950ರಲ್ಲಿ ಅವಿರ್ಭವಿಸಿದ ರಾಜ್ಯಗಳ ಆರ್ಥಿಕ ವರ್ಗೀಕರಣದ ಫಲವಾಗಿ ಸ್ಥಾಪಿತವಾದ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಕರ್ನಾಟಕ ರಾಜ್ಯ ಸರ್ಕಾರದ ಆರ್ಥಿಕ ಸಚಿವಾಲಯದ ನೇರ ನಿಯಂತ್ರಣದಲ್ಲಿ ಕೆಲಸ ನಿರ್ವಹಿಸುತ್ತಿರುವ ಒಂದು ಪ್ರಧಾನ ಇಲಾಖೆಯಾಗಿರುತ್ತದೆ. ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ರಾಜ್ಯದಲ್ಲಿನ ಎಲ್ಲಾ ಗ್ರಾಮ ಪಂಚಾಯಿತಿಗಳು/ ನಗರ ಸ್ಥಳೀಯ ಸಂಸ್ಥೆಗಳು/ ಶಾಸನಬದ್ಧ ಮಂಡಳಿಗಳು/ ನಿಗಮಗಳು/ ವಿಶ್ವವಿದ್ಯಾಲಯಗಳು ಹಾಗೂ ಇನ್ನಿತರ ಸ್ವಾಯತ್ತ ಸಂಸ್ಥೆಗಳ ಲೆಕ್ಕಪತ್ರಗಳ ಲೆಕ್ಕಪರಿಶೋಧನಾ ಕಾರ್ಯಗಳಲ್ಲದೆ ಸರ್ಕಾರವು ನಿರ್ದೇಶಿಸಿದ ಯಾವುದೇ ಸಂಸ್ಥೆಗಳ ವಿಶೇಷ ಲೆಕ್ಕಪರಿಶೋಧನೆಯನ್ನು ಕೈಗೊಳ್ಳುವುದು. ಜಿಲ್ಲಾ ಸ್ಥಳೀಯ ಲೆಕ್ಕಪರಿಶೋಧನಾ ವರ್ತುಲಗಳನ್ನು ಪ್ರಾಂತೀಯ ಕಛೇರಿವಾರು ವಿಂಗಡಿಸಿ ಪ್ರಾಂತೀಯ ಕಛೇರಿ ನಿಯಂತ್ರಣದಡಿ ಕಾರ್ಯ ನಿರ್ವಹಿಸುವಂತೆ ಅವಕಾಶ ಕಲ್ಪಿಸಿದೆ.
4. ಖಜಾನೆ ಇಲಾಖೆ:-
ರಾಜ್ಯದ ಖಜಾನೆಗಳು ಹಣಕಾಸು ಪದ್ಧತಿಯಲ್ಲಿ ಸಾರ್ವಜನಿಕ ಲೆಕ್ಕಗಳು ಪ್ರಾರಂಭವಾಗುವ ಪ್ರಾಥಮಿಕ ಘಟಕಗಳಾಗಿದ್ದು, ಸರ್ಕಾರದ ಹಣಕಾಸು ವಹಿವಾಟಿನ ಜಮಾ ಹಾಗೂ ವೆಚ್ಚವನ್ನು ನಿರ್ವಹಿಸಿ ಅವುಗಳ ಲೆಕ್ಕಗಳನ್ನು ಸಲ್ಲಿಸುವ ಪ್ರಕ್ರಿಯೆಗಳನ್ನು ನಿರ್ವಹಿಸುತ್ತಿವೆ. ಖಜಾನೆ ಇಲಾಖೆಯು ಸರ್ಕಾರದ ಸಚಿವಾಲಯದ ಆರ್ಥಿಕ ಇಲಾಖೆಯ ಆಡಳಿತ ಅಧೀನಕ್ಕೆ ಒಳಪಟ್ಟಿದ್ದು, ಯೋಜನೇತರ ಇಲಾಖೆಯಾಗಿದೆ. ಆಯುಕ್ತರು, ಖಜಾನೆ ಇಲಾಖೆಯ ಮುಖ್ಯ ನಿಯಂತ್ರಣಾಧಿಕಾರಿಗಳಾಗಿರುತ್ತಾರೆ. ಖಜಾನೆ ಆಯುಕ್ತಾಲಯದ ನಿಯಂತ್ರಣಕ್ಕೆ ಒಳಪಟ್ಟು ರಾಜ್ಯದ ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲಿ ಒಂದೊಂದು ಜಿಲ್ಲಾ ಖಜಾನೆ, ಪ್ರತಿಯೊಂದು ತಾಲ್ಲೂಕು ಕೇಂದ್ರಗಳಲ್ಲಿ ಒಂದು ಉಪಖಜಾನೆ ಹಾಗೂ ಸಾರ್ವಜನಿಕರ ಹೆಚ್ಚಿನ ಸೌಲಭ್ಯಗಾಗಿ ಕೆಲವು ತಾಲ್ಲೂಕು ಕೇಂದ್ರದ ಹೊರಗೆ ಇರುವ ಹೋಬಳಿ ಕೇಂದ್ರಗಳಲ್ಲಿ ಒಂದೊಂದು ಪೂರ್ಣ ಪ್ರಮಾಣದ ಉಪಖಜಾನೆಗಳು ಕಾರ್ಯ ನಿರ್ವಹಿಸುತ್ತಿವೆ.
5. ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ:-
21-04-2010 ರಲ್ಲಿ ಬಂಡವಾಳ ಹೂಡಿಕೆ ಮಾಹಿತಿ ನಿರ್ವಹಣೆ ಹಾಗೂ ವಸೂಲಾತಿ, ಸಣ್ಣ ಉಳಿತಾಯ ಮತ್ತು ರಾಜ್ಯ ಲಾಟರಿ ಇಲಾಖೆಯನ್ನು ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ನಿರ್ದೇಶನಾಲಯ ಎಂದು ಪುನರ್ ನಾಮಕರಣ ಮಾಡಿ ಪಿಂಚಣಿದಾರರ ಕುಂದುಕೊರತೆಗಳನ್ನು ಇತ್ಯರ್ಥಗೊಳಿಸುವ ಕಾರ್ಯವನ್ನು ಸೇರ್ಪಡೆ ಮಾಡಲಾಗಿತ್ತು. ನಂತರ ಮುನ್ಸಿಪಲ್ ನೌಕರರ ಪಿಂಚಣಿ ಪ್ರಾಧೀಕರಣ ಕಾರ್ಯವನ್ನು ವಹಿಸಲಾಗಿದೆ. ಇಲಾಖೆಯು ಸರ್ಕಾರದ ಆರ್ಥಿಕ ಇಲಾಖೆಯ ಆಡಳಿತ ವ್ಯಾಪ್ತಿಗೆ ಒಳಪಟ್ಟು ಕಾರ್ಯನಿರ್ವಹಿಸುತ್ತಿದೆ. ಇಲಾಖೆಯು ಪ್ರಸ್ತುತ ಸಣ್ಣ ಉಳಿತಾಯ ಏಜೆಂಟರ ಏಜೆನ್ಸಿ ನವೀಕರಣ ಮತ್ತು ರದ್ಧತಿ, ಆಸ್ತಿ ಋಣ ನಿರ್ವಹಣೆಯ ಮಾಹಿತಿ ಗಣಕೀಕರಣ ಕೆಲಸ, ಪಿಂಚಣಿ ಕುಂದು ಕೊರತೆ ನಿರ್ವಹಣೆ (ನಿವೃತ್ತ ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಮಾತ್ರ) ಮುಂತಾದ ಪ್ರಮುಖ ವಿಷಯಗಳ ಬಗ್ಗೆ ವ್ಯವಹರಿಸುತ್ತಿದೆ.
6. ಕರ್ನಾಟಕ ಸರ್ಕಾರಿ ವಿಮಾ ಇಲಾಖೆ:-
ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ ಪ್ರಮುಖವಾಗಿ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) ನಿಯಮಗಳು-1958 ರನ್ವಯ ಜೀವ ವಿಮಾ ವ್ಯವಹಾರವನ್ನು ಮತ್ತು ಸರ್ಕಾರದ ಹಾಗೂ ಸರ್ಕಾರವು ಆರ್ಥಿಕ ಹಿತಾಸಕ್ತಿಯನ್ನು ಹೊಂದಿರುವ ವಾಹನಗಳ ವಿಮಾ ವ್ಯವಹಾರವನ್ನು ನಿರ್ವಹಿಸಲಾಗುತ್ತಿದೆ. ಅಂತೆಯೇ ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರಿಗೆ ಅನ್ವಯವಾಗುವ ಕುಟುಂಬ ಕಲ್ಯಾಣ ನಿಧಿಯ ವ್ಯವಹಾರದ ಲೆಕ್ಕಗಳನ್ನು ಸಹ ನಿರ್ವಹಿಸಲಾಗುತ್ತಿದೆ. ದಿನಾಂಕ 01/04/2010 ರಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಾಮೂಹಿಕ ವಿಮಾ ಯೋಜನೆಯ ನಿಧಿ ನಿರ್ವಹಣೆಯ ಜವಾಬ್ದಾರಿಯನ್ನೂ ಸಹ ಈ ಇಲಾಖೆಗೆ ವಹಿಸಲಾಗಿದೆ.
7. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ:-
ಇದು ರಾಜ್ಯದ ಪ್ರಮುಖ ಹಣಕಾಸು ಸಂಸ್ಥೆಯಾಗಿದ್ದು, ವ್ಯಾಪಾರ ಮತ್ತು ಉದ್ಯಮಗಳಿಗೆ ಹಣಕಾಸಿನ ನೆರವು ನೀಡುತ್ತಿದೆ. ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ, ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಮತ್ತು ಇತರ ವಲಯಗಳಿಗೂ ಸಾಲಗಳ ಮೂಲಕ ಸಹಾಯ ಮಾಡುತ್ತಿದೆ. ಸಮಾಜದ ದುರ್ಬಲ ವರ್ಗಗಳ ಉದ್ಯಮಿಗಳಿಗೆ ಹಾಗೂ ಮೊದಲ ಪೀಳಿಗೆಯ/ ತಲೆಮಾರಿನ ಉದ್ಯಮಿಗಳಿಗೂ ಸಹ ನೆರವು ನೀಡುತ್ತಿದೆ. ಇದಲ್ಲದೆ, ರಾಜ್ಯ ಸರ್ಕಾರವು ಘೋಷಿಸಿದ ವಿವಿಧ ಬಡ್ಡಿ ಸಬ್ಸಿಡಿ ಯೋಜನೆಗಳನ್ನು ಸಹ ಜಾರಿಗೊಳಿಸಲಾಗುತ್ತಿದೆ. ನಿಗಮದ ಸಕಾಲಿಕ ನೆರವಿನಿಂದ ರಾಜ್ಯದಲ್ಲಿ ಸಣ್ಣ ಪ್ರಮಾಣದ ಮತ್ತು ಮಧ್ಯಮ ಪ್ರಮಾಣದ ವಲಯಗಳ ವ್ಯಾಪಾರ ಮತ್ತು ವಾಣಿಜ್ಯ ಬೆಳವಣಿಗೆಗೆ ಸಹಾಯಕವಾಗಿದೆ.
8. ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ:-
ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತವು ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯ ಆಡಳಿತ ವ್ಯಾಪ್ತಿಗೆ ಬರುತ್ತದೆ. ಈ ಸಂಸ್ಥೆಯನ್ನು ದಿನಾಂಕ: 02.06.2003ರಂದು ಕಂಪನಿ ಅಧಿನಿಯಮದಡಿ ಖಾಸಗಿ ನಿಯಮಿತ ಕಂಪನಿಯಾಗಿ ಅಸ್ತಿತ್ವಕ್ಕೆ ತರಲಾಯಿತು. ನ್ಯಾಯಸಮ್ಮತ ಹಾಗೂ ಪಾರದರ್ಶಕ ವ್ಯವಸ್ಥೆಯ ಮೂಲಕ ಕರ್ನಾಟಕ ರಾಜ್ಯದಲ್ಲಿ ಸುಂಕ ಸಹಿತ ಮದ್ಯದ ಪ್ರವಹನವನ್ನು ನಿರ್ವಹಿಸುವ ಮುಖ್ಯ ಉದ್ದೇಶ ಈ ಕಂಪನಿಯದಾಗಿದೆ. ಇದರಿಂದ ಒಂದೆಡೆ ರಾಜ್ಯದ ಆದಾಯ ಹೆಚ್ಚಳವಾಗಲಿದ್ದು ಮತ್ತೊಂದೆಡೆ ಸುಂಕ ಪಾವತಿಯನ್ನು ತಪ್ಪಿಸುವ ಪ್ರವೃತ್ತಿಗೆ ಕಡಿವಾಣ ಹಾಕಿ ಗ್ರಾಹಕರಿಗೆ ಉತ್ತಮವಾದ ಪಾನೀಯವನ್ನು ಸರಬರಾಜು ಮಾಡಲು ಅನುಕೂಲವಾಗಿದೆ. ಅಲ್ಲದೆ, ಸರಬರಾಜುದಾರರಿಗೆ, ರಿಟೈಲ್ ವರ್ತಕರಿಗೆ ಮತ್ತು ಇತರ ಸಂಬಂಧಿತರಿಗೆ ಸಕಾಲಿಕ ಹಾಗೂ ಅನಿಯಂತ್ರಿತ ಉತ್ತಮ ಗುಣಮಟ್ಟದ ಸೇವೆಯನ್ನು ಕಡಿಮೆ ವೆಚ್ಚದಲ್ಲಿ ಒದಗಿಸುತ್ತದೆ.
9. ವಿತ್ತೀಯ ಕಾರ್ಯ ನೀತಿ ಸಂಸ್ಥೆ:-
ವಿತ್ತೀಯ ಕಾರ್ಯ ನೀತಿ ಸಂಸ್ಥೆಯನ್ನು ಸರ್ಕಾರವು 2007 ರಲ್ಲಿ ಸ್ಥಾಪಿಸಿತು. ಈ ಸಂಸ್ಥೆಯನ್ನು ಸ್ಥಾಪಿಸುವುದರ ಮೂಲಕ ಕರ್ನಾಟಕ ಸರ್ಕಾರವು ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು 2002 ರಲ್ಲಿ ಸಾಂಸ್ಥೀಕರಿಸುವ ಬದ್ಧತೆಯನ್ನು ತೋರಿಸಿತು. ವಿತ್ತೀಯ ಕಾರ್ಯ ನೀತಿ ವಿಶ್ಲೇಷಣಾ ಕೋಶವು ರಾಜ್ಯ ಸರ್ಕಾರದಲ್ಲಿ ಮಾಹಿತಿಯಾಧರಿತ ನಿರ್ಣಯ ಕೈಗೊಳ್ಳುವಿಕೆಗೆ ಉತ್ತೇಜಿಸಲು ಇರುವ ಪ್ರಮುಖ ಸಾಂಸ್ಥಿಕ ರಚನೆಯಾಗಿದೆ. ವಿತ್ತೀಯ ನೀತಿಯ ತಕ್ಷಣದ ಮತ್ತು ದೀರ್ಘಕಾಲೀನ ಪರಿಣಾಮಗಳು, ಯೋಜನೆಯ ಅವಧಿಯಲ್ಲಿ ಸಾರ್ವಜನಿಕ ಸಂಪನ್ಮೂಲಗಳ ಕ್ರೋಡೀಕರಣ, ಹಂಚಿಕೆ ಮತ್ತು ಬಳಕೆ ಕುರಿತ ಕಾರ್ಯವಿಧಾನ ಮತ್ತು ನಿಯಂತ್ರಿತ ನಿರ್ಧಾರಗಳ ಬಗೆಗೆ ನಿರಂತರವಾಗಿ ಮೌಲ್ಯಮಾಪನ ಕೈಗೊಳ್ಳುವುದು ಇದರ ಪ್ರಥಮ ಆದ್ಯತೆಯಾಗಿದೆ. ಈ ಘಟಕ ವಿಶ್ಲೇಷಣಾತ್ಮಕ ಮೆದುಳಿನ ರೀತಿ ಕಾರ್ಯನಿರ್ಹಿಸುತ್ತಿದ್ದು, ಚಾಲ್ತಿಯಲ್ಲಿರುವ ಸುಧಾರಣಾ ಕಾರ್ಯಕ್ರಮಗಳಿಗೆ ವಿಶ್ಲೇಷಣಾತ್ಮಕ ಬೆಂಬಲ ನೀಡುತ್ತಿದೆ.